ಕಾಡು ಹೊಗೆಸೊಪ್ಪು

ಕಂಪ್ಯಾನುಲೇಸೀ ಅಥವಾ ಲೊಬೀಲಿಯೆಸೀ ಕುಟುಂಬಕ್ಕೆ ಸೇರಿದ ಲೊಬೀಲಿಯ ನಿಕೊಟಿಯಾನಿಫೋಲಿಯ ಎಂಬ ವೈಜ್ಞಾನಿಕ ಹೆಸರುಳ್ಳ ಮೂಲಿಕೆ ಸಸ್ಯ. ಈ ಗಿಡ ಸಾಮಾನ್ಯವಾಗಿ 2900'-6900' ಎತ್ತರದ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳು, ನೀಲಗಿರಿ ಕಾಡುಗಳಲ್ಲಿ ವಿಶೇಷ. ಸಾಮಾನ್ಯವಾಗಿ 4'-10' ಎತ್ತರಕ್ಕೆ ಬೆಳೆಯುತ್ತದೆ. ಇದರ ಕಾಂಡ ದಪ್ಪ ಹಾಗೂ ಟೊಳ್ಳು. ಈ ಗಿಡದಲ್ಲಿ ರೆಂಬೆಗಳೇ ಬಹಳ ಕಡಿಮೆ. ಕಾಂಡ ಹಾಗೂ ಎಲೆಗಳಲ್ಲಿ ಬಿಳಿಯ ಬಣ್ಣದ ಹಾಲ್ನೊರೆ (ಲೇಟೆಕ್ಸ್) ಇದೆ. ಎಲೆಗಳು ಅಸಂಖ್ಯ; ಪರ್ಯಾಯವಾಗಿ ಜೋಡಣೆಗೊಂಡಿವೆ. ಕೆಳಗಿನ ಎಲೆಗಳು 15"ಗಳಷ್ಟು ದೊಡ್ಡದಾಗಿವೆ. ಕಾಂಡದ ತುದಿಗೇರಿದಂತೆ ಎಲೆಗಳ ಗಾತ್ರ ಚಿಕ್ಕದಾಗುತ್ತ ಬರುತ್ತದೆ. ಎಲೆಗಳು ಉದ್ದ, ಈಟಿಯಾಕಾರ. ಹೂಗೊಂಚಲು ಅಂತ್ಯಾರಂಭಿ ಮಾದರಿಯದು, 1 ಅಡಿ ಉದ್ದವಿದೆ. ಹೂಗಳ ಬಣ್ಣ ಬಿಳಿ. ಪುಷುಪತ್ರಗಳು 5, ದಳಗಳು 5, ಪರಸ್ಪರ ಕೂಡಿಕೊಂಡಿವೆ. ಕೂಡಿರುವ ಹೂದಳ ಸಮೂಹ 2 ತುಟಿಗಳಾಗಿ ಭಾಗವಾಗಿದೆ. ಕೇಸರಗಳು 3-5. ಕೇಸರದಂಡಗಳು ಒಂದರೊಡನೊಂದು ಕೂಡಿಕೊಂಡು ಕೊಳವೆಯಾಕಾರದಲ್ಲಿವೆ. ಅಂಡಾಶಯ ನೀಚಸ್ಥಾನದ್ದು ಅಥವಾ ಅರ್ಧ ನೀಚಸ್ಥಾನದ್ದು. ಫಲ ಸಂಪುಟ ಮಾದರಿಯದು. ಬೀಜಗಳು ಸೂಕ್ಷ್ಮ ಅಸಂಖ್ಯಾತ ಚಪ್ಪಟೆಯಾಗಿವೆ. ಅವುಗಳ ಬಣ್ಣ ಹಳದಿ ಮಿಶ್ರಿತ ಕಂದು.

 ಈ ಗಿಡದಿಂದ ಲೊಬಿಲೈನ್ ಗುಂಪಿಗೆ ಸೇರಿದ ಸಸ್ಯಕ್ಷಾರಗಳನ್ನು (ಆಲ್ಕಲಾಯಿಡ್ಸ್) ತೆಗೆಯುತ್ತಾರೆ. ಇವಕ್ಕೆ ಹೊಗೆಸೊಪ್ಪಿನಂಥ ಘಾಟು ವಾಸನೆಯಿದೆ. ಪುಷ್ಪಗುಚ್ಛದ ಭಾಗದಲ್ಲಿ ಈ ಕ್ಷಾರಗಳ ಅಂಶ ಹೆಚ್ಚಾಗಿದ್ದು ಎಲೆ ಮತ್ತು ಕಾಂಡಗಳಲ್ಲಿ ಕಡಿಮೆಯಾಗಿವೆ. ಈ ಕ್ಷಾರಗಳಲ್ಲಿ ಲಿಬಿಲಾನಿಡೈನ್ ಎಂಬುದು ಮುಖ್ಯವಾದುದು. ಲೊಬಿನಾನೈನ್ ಮತ್ತು ಲೊಬಿನೈನ್ ಎಂಬ ಕ್ಷಾರಗಳೂ ಸ್ವಲ್ಪ ಪ್ರಮಾಣದಲ್ಲಿರುತ್ತವೆ. ಕಾಂಡ ಮತ್ತು ಎಲೆ ಭಾಗವನ್ನು ಅಕ್ಟೋಬರ್ - ನವೆಂವರ್ ತಿಂಗಳಲ್ಲಿ ಸಂಗ್ರಹಿಸಿ, ನೆರಳಿನಲ್ಲಿ ಒಣಗಿಸುವುದುಂಟು. ಇದಕ್ಕೆ ಲೊಬೀಲಿಯ ಹರ್ಬ ಎಂಬ ಔಷಧೀಯ ಹೆಸರಿದೆ. ಇದು ಆಸ್ತಮ ಮತ್ತು ಕೆಲವು ಶ್ವಾಸನಾಳಗಳ ರೋಗಗಳಿಗೆ ಒಳ್ಳೆಯ ಔಷಧಿಯೆಂದು ಹೆಸರಾಗಿದೆ.

 ಈ ಗಿಡ ಒಣಗಿದಾಗ ಇದರಿಂದ ಅಂಟು ಅಂಟಾಗಿರುವ ಒಂದು ಬಗೆಯ ಕಹಿಯಾಗಿರುವ ಪದಾರ್ಥ ಅಲ್ಲಲ್ಲಿ ಒಸರುವುದು ಕಂಡುಬರುತ್ತದೆ. ಎಲೆಗಳಲ್ಲಿನ ಹಾಲ್ನೊರೆ ಚರ್ಮಕ್ಕೆ ತಗುಲಿದರೆ ಉರಿಯೂತ ಉಂಟಾಗುತ್ತದೆ. ಈ ಗಿಡ ವಿಷಪೂರಿತವಾದುದರಿಂದ ಇದನ್ನು ಪೂತಿನಾಶಕವಾಗಿಯೂ ಉಪಯೋಗಿಸಬಹುದು. ಸಿಂಹಳದಲ್ಲಿ ಇದನ್ನು ಕೀಟನಾಶಕವಾಗಿ ಬಳಸುತ್ತಾರೆ. ಇದರ ಎಲೆ ಅಥವಾ ಬೀಜಗಳನ್ನು ಆಕಸ್ಮಿಕವಾಗಿ ಸೇವಿಸಿದಲ್ಲಿ ಉಸಿರಾಟದ ಮೇಲೆ ತೀವ್ರ ಪರಿಣಾಮವುಂಟಾಗಿ ಸಾಯುವುದೂ ಉಂಟು.

 ಇದೇ ಜಾತಿಯ ಇನ್ನೊಂದು ಮುಖ್ಯವಾದ ಗಿಡ ಲೊಬೀಲಿಯ ಇನ್‍ಫ್ಲೇಟ. ಈ ಗಿಡದಲ್ಲಿ ಮೇಲೆ ಹೇಳಿದ ಕ್ಷಾರಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಇದು ಹೆಚ್ಚು ಉಪಯೋಗಕಾರಿಯೂ ಹೌದು. ಆದರೆ ಇದು ಭಾರತದಲ್ಲಿ ಬೆಳೆಯುವುದಿಲ್ಲವಾದ್ದರಿಂದ ಇದರ ಬದಲಾಗಿ ಲೊಬೀಲಿಯ ನಿಕೊಟಿಯಾನಿಫೋಲಿಯವನ್ನೆ ಉಪಯೋಗಿಸುತ್ತಾರೆ.  

(ಆರ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ